ಪುಟಿನ್ ಪ್ರಪಂಚವೇ ಒಂದು ಮಹಾನ್ ರಹಸ್ಯ.
- DENIL

- Dec 8
- 3 min read
Updated: 15 minutes ago

ಪುಟಿನ್ ಪ್ರಪಂಚವೇ ಒಂದು ಮಹಾನ್ ರಹಸ್ಯ. ಬೇರೆಲ್ಲ ರಾಷ್ಟ್ರಗಳ ಅಧ್ಯಕ್ಷರು ಅಥವಾ ಪ್ರಧಾನಿಗಳು ಭಾರತಕ್ಕೆ ಆಗಮಿಸಿದಾಗ, ಅವರೊಂದಿಗೆ ಪತ್ನಿಯೋ, ಮಕ್ಕಳೋ ಬರುವುದು ಸಾಮಾನ್ಯ. ಆದರೆ, ಪುಟಿನ್ ಅಕ್ಕಪಕ್ಕ ಕಾಣುವುದು ಕೇವಲ ರಷ್ಯನ್ ಭದ್ರತಾ ತಂಡವಷ್ಟೇ. ಪುಟಿನ್ ಕುಟುಂಬದ ಯಾವೊಬ್ಬ ಸದಸ್ಯರೂ ಆಜುಬಾಜು ಇರುವುದಿಲ್ಲ. ಪುಟಿನ್ ಕೊನೆಯ ಬಾರಿಗೆ ತನ್ನ ಪತ್ನಿಯೊಂದಿಗೆ ವಿದೇಶಿ ನೆಲದಲ್ಲಿ ಕಾಣಿಸಿಕೊಂಡಿದ್ದು 2012ರಲ್ಲಿ. ಅಂದಿನಿಂದ ರಷ್ಯಾವಿರಲಿ, ವಿದೇಶವಿರಲಿ, ವ್ಲಾಡಿಮಿರ್ ಪುಟಿನ್ ಪತ್ನಿಯೊಂದಿಗೆ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ.
ಘೋರ ಹಸಿವು, ಯುದ್ಧದಿಂದ ಬದುಕೇ ಚೆಲ್ಲಾಪಿಲ್ಲಿಯಾದಂಥ ಸ್ಥಿತಿ... ಬಾಲ್ಯದ ಈ ಎಲ್ಲ ಸಂಕಟಗಳನ್ನು ದಾಟಿ ಪುಟಿನ್ 23ನೇ ವಯಸ್ಸಿನಲ್ಲಿ ರಷ್ಯಾದ ಗುಪ್ತಚರ ಸಂಸ್ಥೆ ಕೆಜಿಬಿಯಲ್ಲಿ ಕೆಲಸ ಹಿಡಿದರು. ಅದೊಂದು ದಿನ ಸಿನಿಮಾ ನೋಡಲು ಹೋದಾಗ ಇವರ ಕಣ್ಸೆಳೆದಾಕೆ ಗಗನಸಖಿ ಲ್ಯುಡ್ಮಿಲಾ. ಈ “ಡೇರ್ ಡೆವಿಲ್ ಸ್ಪೈ” ಜತೆ 1983ರಲ್ಲಿ ವಿವಾಹವಾದ ಲ್ಯುಡ್ಮಿಲಾ ಪುಟಿನ್ ಕೆಲಸದ ಮೇಲಿದ್ದ ರಷ್ಯಾದಲ್ಲೂ, ಜರ್ಮನಿಗಳಲ್ಲಿಯೂ ಅತ್ಯಂತ ಸವಾಲಿನ ದಿನಗಳನ್ನೇ ಕಂಡವಳು. ಎಷ್ಟೋ ಸಲ ಪುಟಿನ್ ರನ್ನು ಮುಗಿಸಲು ಪಿತೂರಿಗಳು, ದಾಳಿಗಳೂ ಆಕೆಯ ಕಣ್ಣೆದುರೇ ನಡೆಯುತ್ತಿದ್ದರೂ, ಈಕೆ ಅಂಜದ ಹೆಣ್ಣಾಗಿದ್ದಳು. ರಾಜಕೀಯ ಸ್ಥಿತ್ಯಂತರದಲ್ಲಿ 1999ರಲ್ಲಿ ಪುಟಿನ್ ರಷ್ಯಾದ ಪ್ರಧಾನಿಯಾದಾಗ, ಮರುವರ್ಷವೇ ಅಧ್ಯಕ್ಷರಾದಾಗ ಲುಡ್ಮಿಲಾಗೆ ವೈಭವದ ದಿನ ಕಾಣುವ ಯೋಗ ಬಂತು. ಆದರೆ, ಅಷ್ಟೊತ್ತಿಗೆ ಅವರ ದಾಂಪತ್ಯದಲ್ಲಿನ ಪ್ರೀತಿಯೇ ಕಣ್ಮರೆಯಾಗಿತ್ತು. ಒಮ್ಮೆ ಸಂದರ್ಶನದಲ್ಲಿ ಲ್ಯುಡ್ಮಿಲಾ ತಮ್ಮ ದುಃಖ ಹೊರಹಾಕುತ್ತಾ, “ಪುರುಷರು ಕೆಲವು ಮಹಿಳೆಯರನ್ನೇ ನಿರ್ದಿಷ್ಟವಾಗಿ ಇಷ್ಟಪಡ್ತಾರೆ. ಆದರೆ, ನಾನು ಆ ರೀತಿಯ ಮಹಿಳೆಯಲ್ಲ. ಪುಟಿನ್ ನನ್ನನ್ನು ತನ್ನ ತೋಳುಗಳಲ್ಲಿಯೂ ಸೆಳೆದುಕೊಳ್ಳುತ್ತಿರಲಿಲ್ಲ “ ಎಂದಿದ್ದರು. ಆದಾಗ್ಯೂ, ಪುಟಿನ್ ಮೊದಲ ಅವಧಿಯಲ್ಲಿ ತಾವು ಹೋದಲ್ಲೆಲ್ಲ ಲ್ಯುಡ್ಮಿಲಾರನ್ನು ಕರೆದೊಯ್ಯುತ್ತಿದ್ದರು.
ಆದರೆ, 2ನೇ ಅವಧಿಯಲ್ಲಿ ಪುಟಿನ್ ಕಂಡಿದ್ದು ಒಬ್ಬಂಟಿಯಾಗಿ. ವಿಲಾಸಿ ಅಧ್ಯಕ್ಷನೊಳಗೆ ಸ್ತ್ರೀಲೋಲುಪತೆ ಮಿತಿಮೀರಿತ್ತು. ನಾವೆಲ್ಲ ಇಳಿವಯಸ್ಸು ಎಂದು ಭಾವಿಸುವ 60ನೇ ವಯಸ್ಸಿನಲ್ಲಿ ಪುಟಿನ್ ತಮ್ಮ ಪತ್ನಿಗೆ ವಿಚ್ಛೇದನ ಕೊಟ್ಟರು. ಮೊದಲ ಪತ್ನಿಗೆ ಹುಟ್ಟಿದ ಇಬ್ಬರು ಹೆಣ್ಮಕ್ಕಳಿಗೆ ಪುಟಿನ್ ತಮ್ಮ ತಾಯಿಯ ಹೆಸರನ್ನಿಟ್ಟಿದ್ದರು. ಮಕ್ಕಳಾದ ಮರಿಯಾ ಮೊರೊಂಟ್ಸೋವಾಸ, ಕ್ಯಾಥರಿನಾ ಟಿಖೋನೋವಾಗೆ ಭದ್ರತೆ ಕಾರಣದಿಂದ ಮನೆಯಲ್ಲಿಯೇ ಶಿಕ್ಷಣ ಕೊಡಿಸಲಾಯಿತು. ಅವರ ಸುತ್ತಮುತ್ತ ಇಪ್ಪತ್ನಾಲ್ಕು ತಾಸು ಅಂಗರಕ್ಷಕರ ಕಾವಲು. ಯಾವುದೋ ಗುಪ್ತನಾಮ ಇಟ್ಟುಕೊಂಡು ವಿಶ್ವವಿದ್ಯಾಲಯದ ಪದವಿ ಪಡೆದರು. ಕ್ಯಾಥರಿನಾ ಖ್ಯಾತ ಡ್ಯಾನ್ಸರ್ ಆದಳು. ಮರಿಯಾ ವೈದ್ಯಕೀಯ ಸಂಶೋಧಕಿಯಾದಳು. ಸದ್ಯ ಇಬ್ಬರೂ ವಿವಾಹವಾಗಿದ್ದಾರೆ, ಪುಟಿನ್ ಗೆ ಮೊಮ್ಮಕ್ಕಳೂ ಇದ್ದಾರೆ. ಆದರೇನು ಬಂತು? ಇವರಾರಿಗೂ ಸಾರ್ವಜನಿಕವಾಗಿ ಸ್ವಚ್ಛಂದ ಜೀವನ ನಡೆಸಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಇನ್ನು ಎರಡನೇ ಪತ್ನಿಯ ಮಕ್ಕಳ ಕತೆಯೂ ಅಷ್ಟೇ.
• • •
ಮಕ್ಕಳಿಗೆ ಇಂಗ್ಲಿಷ್ ಕಲಿಸಲು ಆಫ್ರಿಕದ ಶಿಕ್ಷಕರು
ಆಕೆ ರಷ್ಯಾದ ಒಲಿಂಪಿಕ್ ಚಿನ್ನದ ಪದಕ ವಿಜೇತೆ, ಜಿಮ್ನಾಸ್ಟಿಕ್ ಸುಂದರಿ, ಅಲಿನಾ ಕಬಾವಾ. ಅರವತ್ತರ ನಂತರ ಪುಟಿನ್ ಮನಸ್ಸು ಒಪ್ಪಿಸಿದ್ದು ಈ ಸುಂದರಿಗೆ. ತನಗಿಂತ 31 ವರ್ಷ ಕಿರಿಯಳಾದರೂ, ಪುಟಿನ್ ರನ್ನು ಎಲ್ಲ ರೀತಿಯಿಂದಲೂ “ಮಿಸ್ಟರ್ ಪರ್ಫೆಕ್ಟ್” ಎಂದು ಒಪ್ಪಿಕೊಂಡಾಕೆ ಅಲಿನಾ. ಪುಟಿನ್ ಜತೆ ಈಕೆ ಉಂಗುರ ಬದಲಿಸಿಕೊಂಡಿದ್ದರೂ, ಇವರಿಬ್ಬರೂ ವಿವಾಹಿತರು ಎನ್ನುವುದು ಹೊರಜಗತ್ತಿಗೆ ಇನ್ನೂ ಖಾತ್ರಿಯಾಗಿಲ್ಲ. ಆದರೂ, ಅಲಿನಾ ಪುಟಿನ್ನರ 2ನೇ ಪತ್ನಿ ಅಂತಲೇ ಹೇಳಲಾಗುತ್ತದೆ. ಈ ಜೋಡಿಗೆ ಈಗ ಇಬ್ಬರು ಗಂಡು ಮಕ್ಕಳು. ಇಬ್ಬರನ್ನೂ ಪುಟಿನ್ ರಹಸ್ಯವಾಗಿ ಸಾಕುತ್ತಿದ್ದಾರೆ. ಅಂಗರಕ್ಷಕರ ಕಾವಲಿನಲ್ಲಿ, ಮಕ್ಕಳಿಗೆ ಮನೆಯೊಳಗೇ ಶಿಕ್ಷಣ ನೀಡಲಾಗುತ್ತಿದೆ. 4 ಮತ್ತು 8 ವರ್ಷದ ಈ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣದ ಅಗತ್ಯ ಬಿದ್ದಾಗ, ದಕ್ಷಿಣ ಆಫ್ರಿಕಾದ ಪಾಸ್ ಪೋರ್ಟ್ ಹೊಂದಿದ ಶಿಕ್ಷಕರನ್ನು ಪುಟಿನ್ ನೇಮಿಸಿಕೊಂಡಿದ್ದರು. ದಕ್ಷಿಣ ಆಫ್ರಿಕಾ ಜತೆಗೆ ರಷ್ಯಾ ಉತ್ತಮ ರಾಜಕೀಯ ಸಂಬಂಧ ಹೊಂದಿದ್ದು, ಅವರಿಂದ ಇಂಗ್ಲಿಷ್ ಕಲಿಯುವುದು ಸೂಕ್ತ ಎನ್ನುವುದು ಪುಟಿನ್ ನಂಬಿಕೆ. ಪುಟಿನ್ ತಮ್ಮ ಮಕ್ಕಳೊಂದಿಗೆ ರಹಸ್ಯ ಪ್ರವಾಸದಲ್ಲಿ ಕಳೆಯುತ್ತಾರೆ. ಈ ಪ್ರವಾಸಕ್ಕಾಗಿಯೇ ಖಾಸಗಿ ವಿಮಾನ, ರೈಲು, ಕ್ರೂಸುಗಳಿವೆ.
• • •
ಪುಟಿನ್ ಹೋದಲ್ಲೆಲ್ಲ ಟಾಕ್ಸಿನ್ ಲ್ಯಾಬ್ ಹೋಗುವುದೇಕೆ?
ಪುಟಿನ್ ತಮ್ಮ ಭದ್ರತಾ ತಂಡದ ಹೊರತಾಗಿ ಜಗತ್ತಿನಲ್ಲಿ ಯಾರನ್ನೂ ನಂಬುವುದಿಲ್ಲ. ಪುಟಿನ್ ಸೇವಿಸುವ ಆಹಾರವನ್ನು ಪರೀಕ್ಷಿಸಲು ಒಂದು ಸಂಚಾರಿ ಲ್ಯಾಬ್ ಅವರೊಂದಿಗೆ ಬಂದಿಳಿಯುತ್ತದೆ. ಭಾರತದಲ್ಲಿ ಪುಟಿನ್ ಯಾವುದೇ ಹೋಟೆಲ್ಲಿನಲ್ಲಿ ತಂಗಿದರೂ, ಅಲ್ಲಿನ ಸಿಬ್ಬಂದಿಯ ಸೇವೆ ಪಡೆಯುವುದಿಲ್ಲ. ಬಾಣಸಿಗರು, ಹೌಸ್ ಕೀಪಿಂಗ್ ಸೇರಿದಂತೆ ಎಲ್ಲ ಸೇವಕರೂ ರಷ್ಯಾದವರೇ. ಪುಟಿನ್ ಆಗಮನದ ಮೊದಲು ಈ ಸ್ಪೆಷಲ್ ಬಾಣಸಿಗರಿಗಾಗಿ ಭದ್ರತಾ ತಂಡವು ಹೋಟೆಲ್ ನಲ್ಲಿ ಪ್ರತ್ಯೇಕ ಲಿಫ್ಟ್ ನಿರ್ಮಿಸುತ್ತದೆ. ಇದನ್ನು ಹೋಟೆಲ್ ನ ಇತರ ಸಿಬ್ಬಂದಿ ಬಳಸುವಂತಿಲ್ಲ. ಅಡುಗೆಗೆ ತಯಾರಿಸುವ ಪದಾರ್ಥಗಳೂ ಮಾಸ್ಕೋದಿಂದಲೇ ತಲುಪುತ್ತವೆ. ಪುಟಿನ್ ಸೇವಿಸುವ ಆಹಾರ ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಆ ತಂಡದ ಆಹಾರ ಸುರಕ್ಷತಾ ಅಧಿಕಾರಿಗಳ (ಎಫ್ಎಸ್ಒ) ಮೇಲಿರುತ್ತದೆ. ಅಧ್ಯಕ್ಷರಿಗೆ ಬಡಿಸುತ್ತಿರುವ ಆಹಾರ ವಿಷಕಾರಿಯಲ್ಲ ಎನ್ನುವುದನ್ನು ರುಚಿ ನೋಡಿ ಖಾತ್ರಿಪಡಿಸುವುದು ಕೆಲಸ ಇವರದ್ದು.
• • •
ಪುಟಿನ್ ಮಲ-ಮೂತ್ರವೂ ಬ್ರೀಫ್ ಕೇಸಿನಲ್ಲಿ ರಷ್ಯಾಕ್ಕೆ ಮರಳುತ್ತೆ!
ಪುಟಿನ್ ಅವರ ಭದ್ರತೆಯು ವಿಶ್ವದ ಬೇರಾವುದೇ ನಾಯಕರ ಭದ್ರತೆಗಿಂತ ಅಸಾಮಾನ್ಯ ತಂತ್ರಗಳನ್ನು ಹೊಂದಿದೆ. ಆ ಪೈಕಿ ಒಂದು ಫೂಪ್ ಬ್ರೀಫ್ ಕೇಸ್. ಫ್ರೆಂಚ್ ನಿಯತಕಾಲಿಕೆ ಪ್ಯಾರಿಸ್ ಮ್ಯಾಚ್‌ನ ವರದಿಯ ಪ್ರಕಾರ, ಪುಟಿನ್ ವಿದೇಶ ಪ್ರವಾಸ ಮಾಡುವಾಗ, ಅವರ ಮಲವನ್ನು ಮುಚ್ಚಿದ ಕವರಿನಲ್ಲಿ ಸಂಗ್ರಹಿಸಿ, ಅದನ್ನು ಬ್ರೀಫ್‌ಕೇಸ್‌ನಲ್ಲಿ ರಷ್ಯಾಕ್ಕೆ ಮರಳಿಸಲಾಗುತ್ತದಂತೆ. ಅಂದರೆ, ಪುಟಿನ್ ರ ಮಲದಿಂದ ಅವರ ವೈದ್ಯಕೀಯ ವಿವರಗಳು ಯಾವುದೇ ದೇಶದ ಪಾಲಾಗಬಾರದು ಎನ್ನುವುದು ಈ ತಂತ್ರದ ಉದ್ದೇಶ. ಮಲ ಮೂತ್ರ ಮಾದರಿಗಳು ವ್ಯಕ್ತಿಯ ವೈದ್ಯಕೀಯ ಸ್ಥಿತಿಗತಿ ಮತ್ತು ಆತ ತೆಗೆದುಕೊಳ್ಳುವ ಔಷಧಿಗಳಂಥ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಬಹುದು. 2025ರ ಆಗಸ್ಟ್ ನಲ್ಲಿ ಅಲಾಸ್ಕಾದಲ್ಲಿ ಟ್ರಂಪ್ ಅವರನ್ನು ಭೇಟಿಯಾದಾಗಲೂ, ಫೂಪ್ ಬ್ರೀಫ್ ಕೇಸ್ ಅಲಾಸ್ಕಾ ತಲುಪಿತ್ತು.
• • •
ಪುಟಿನ್ ಬಲಗೈ ಏಕೆ ಅಷ್ಟು ಚಲಿಸುವುದಿಲ್ಲ?
ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು ನಡೆಯುವಾಗ, ಸಮತೋಲನ ಕಾಪಾಡಿಕೊಳ್ಳಲು ತನ್ನೆರಡೂ ತೋಳುಗಳನ್ನು ಹಿಂದೆ ಮುಂದೆ ಬೀಸುತ್ತಿರುತ್ತಾನೆ. ಎಡಗಾಲು ಮುಂದಕ್ಕೆ ಚಲಿಸಿದಾಗ, ಬಲಗೈ ಮುಂದಕ್ಕೆ ಚಲಿಸುತ್ತದೆ ಮತ್ತು ಬಲಗಾಲು ಮುಂದಕ್ಕೆ ಚಲಿಸಿದಾಗ, ಎಡಗೈ ಮುಂದಕ್ಕೆ ಚಲಿಸುತ್ತದೆ. ಇದು ನಮ್ಮನಿಮ್ಮೊಳಗೂ ಇರುವಂಥ ನೈಸರ್ಗಿಕ ಬಯೋಮೆಕಾನಿಕಲ್ ಪ್ರಕ್ರಿಯೆ. ಆದರೆ, ರಷ್ಯಾ ಅಧ್ಯಕ್ಷ ಪುಟಿನ್ ನಡಿಗೆಯನ್ನು ಗಮನಿಸಿದ್ದೀರಾ? ನರವಿಜ್ಞಾನಿಗಳು, ಪತ್ತೇದಾರರಿಗೆ ಮತ್ತು ದೇಹ ಭಾಷಾ ತಜ್ಞರಿಗೆ ಪುಟಿನ್ ನಡಿಗೆ ಸ್ಟೈಲೇ ಅಧ್ಯಯನ ವಸ್ತು. ಕಾರಣ, ಪುಟಿನ್ ನಡೆಯುವಾಗ ಎಡಗೈ ಮಾತ್ರವೇ ಹಿಂದೆ ಮುಂದೆ ಚಲಿಸುತ್ತಿರುತ್ತದೆ, ಬಲಗೈ ಬಹುತೇಕ ದೇಹಕ್ಕೆ ಅಂಟಿಕೊಂಡಿರುತ್ತದೆ. ಒಳಗಿನ ಅದೃಶ್ಯ ವಸ್ತುವನ್ನು ಹಿಡಿದಿಟ್ಟುಕೊಂಡಂತೆ ಅದು ಸ್ಥಿರವಾಗಿರುತ್ತದೆ. ತಜ್ಞರು ಇದನ್ನು “ಗನ್ಸ್ ಲಿಂಗರ್ಸ್ ಗೈಟ್” ಎಂದೇ ಕರೆಯುತ್ತಾರೆ. ಒಳಗಿರುವ ಪಿಸ್ತೂಲಿನ ಮೇಲೆ ಕೈ ಇಟ್ಟುಕೊಳ್ಳಲು ಆ ಕೈ ಸದಾ ಸಿದ್ಧವಾಗಿರುವಂತೆ ತೋರುತ್ತಿರುತ್ತದೆ.
• • •
24 ಸಾವಿರ ನಿರ್ಬಂಧಗಳ ಬಳಿಕವೂ ರಷ್ಯಾ ಕಂಪಿಸುತ್ತಿಲ್ಲವೇಕೆ?
ಶೀತಲ ಸಮರದ ನಂತರ ರಷ್ಯಾವು ಪ್ರಪಂಚದಿಂದ ಪ್ರತ್ಯೇಕ ಎಂಬಂತೆಯೇ ಗುರುತಿಸಿಕೊಂಡಿದೆ. ಉಕ್ರೇನ್ ಯುದ್ಧದ ಬಳಿಕವಂತೂ ಈ ಕಂದಕ ಇನ್ನೂ ಹೆಚ್ಚಾಗಿದೆ. ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಮಾಸ್ಕೋ ಮೇಲೆ ಮನಬಂದಂತೆ ನಿರ್ಬಂಧಗಳನ್ನು ವಿಧಿಸಿವೆ. ಯುರೋಪಿಯನ್ ಸಂಶೋಧನಾ ಕೇಂದ್ರ ಕ್ಯಾಸ್ಟೆಲಮ್ ಇತ್ತೀಚೆಗೆ ರಷ್ಯಾದ ಮೇಲಿನ ನಿರ್ಬಂಧಗಳನ್ನೇ ಪಟ್ಟಿ ಮಾಡಿ ಲೆಕ್ಕ ಇಟ್ಟಿತು. 2022ರ ಉಕ್ರೇನ್ ಆಕ್ರಮಣಕ್ಕೂ ಮುನ್ನ ರಷ್ಯಾ ಸುಮಾರು 2,750 ನಿರ್ಬಂಧಗಳನ್ನು ಇತರೆ ರಾಷ್ಟ್ರಗಳಿಂದ ಎದುರಿಸುತ್ತಿತ್ತು. ಕಳೆದ ಆಗಸ್ಟ್ ವೇಳೆಗೆ ಈ ಸಂಖ್ಯೆ ಸುಮಾರು 24 ಸಾವಿರಕ್ಕೆ ಮುಟ್ಟಿದೆ. ರಷ್ಯಾದ ಪ್ರಮುಖ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಅಂತಾರಾಷ್ಟ್ರೀಯ ಪಾವತಿ ವ್ಯವಸ್ಥೆಯಿಂದ ಸಂಪರ್ಕ ಕಡಿತ ಕಂಡಿವೆ. ರಷ್ಯಾದೊಳಗಿನ ವಹಿವಾಟನ್ನು ಸ್ತಬ್ಧಗೊಳಿಸಲು ಅಮೆರಿಕ ಆಂಡ್ ಫ್ರೆಂಡ್ಸ್ ಎಷ್ಟೇ ಪ್ರಯತ್ನಿಸಿದರೂ, ರಷ್ಯಾಕ್ಕೆ ಯಾವ ಆರ್ಥಿಕ ಅಭದ್ರತೆಯೂ ಸೃಷ್ಟಿಯಾಗಲಿಲ್ಲ. ಪುಟಿನ್ ರೂಪಿಸಿರುವ ಆರ್ಥಿಕ ಜಾಲ ಜಗತ್ತಿನ ಪಾಲಿಗೆ ಅಷ್ಟೇ ರಹಸ್ಯದ್ದು.
ಏನೇ ಆಗಲಿ, ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬರಾದ ವ್ಲಾಡಿಮಿರ್ ಪುಟಿನ್ ಯಾವುದೇ ನೆಲಕ್ಕೆ ಕಾಲಿಟ್ಟಾಗಲೂ, ರೆಡ್ ಕಾರ್ಪೆಟ್ ಮೇಲೆ ನಡೆದಾಗಲೂ ಅಥವಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಣಿಸಿಕೊಂಡಾಗಲೂ ಅವರ ರಹಸ್ಯಮಯ ಬದುಕೇ ಮುನ್ನೆಲೆ ಕಾಣುತ್ತದೆ. ನಾಲ್ಕೂ ಟೈಯರ್ ಪಂಕ್ಚರ್ ಓಡಬಲ್ಲ ಕಾರು, ಆಟಂ ಬಾಂಬ್ ಬಟನ್ನನ್ನೂ ಅಡಗಿಸಿಟ್ಟುಕೊಂಡ ಅವರ ಕಾರಿನ ಬಗ್ಗೆ ಮುಗಿಯದ ಕತೆಗಳಿವೆ. ಪುಟಿನ್ ತಾವೆಂದಿಗೂ ನಾರ್ಮಲ್ ಪ್ರೆಸಿಡೆಂಟ್ ಆಗಲು ಬಯಸಿದವರಲ್ಲ ಎನ್ನುವ ಸೂಚನೆಗಳನ್ನೂ ಈ ವಿಶೇಷತೆಗಳ ಮೂಲಕವೇ ಲೋಕಕ್ಕೆ ರವಾನಿಸಿದವರು. ಮುಕ್ಕಾಲು ವಿಶ್ವವನ್ನು ಪರೋಕ್ಷವಾಗಿ ಎದುರು ಹಾಕಿಕೊಂಡಿರುವ ರಷ್ಯಾ ಅಧ್ಯಕ್ಷರ ಭಾರತದಲ್ಲಿನ ಇಪ್ಪತ್ತೇಳು ಗಂಟೆಗಳು ಜಗದ ಕಂಗಳಿಗೆ ಅವರನ್ನು ಹತ್ತಿರವಾಗಿಸಿವೆ.



Comments