top of page

STAR KARNATAKA

ಸ್ಟಾರ್ ಕರ್ನಾಟಕ 

ಧರ್ಮೋ ರಕ್ಷತಿ ರಕ್ಷಿತಃ 

ಸ್ಟಾರ್ ಕರ್ನಾಟಕ 

  • Facebook
  • Twitter
  • Instagram
  • Youtube

The significance of the gomatha (govu) in kannada ಗೋವಿನ ಮಹತ್ವ

  • Writer: DENIL
    DENIL
  • Sep 1, 2025
  • 2 min read
The significance of the gomatha (govu) in kannada ಗೋವಿನ ಮಹತ್ವ
The significance of the gomatha (govu) in kannada ಗೋವಿನ ಮಹತ್ವ

significance of the gomatha


ಒಮ್ಮೆ ಭೃಗು ಮಹರ್ಷಿಗಳ ಪುತ್ರರಾದ ಚ್ಯವನರು ಮಹಾ ವ್ರತವೊಂದನ್ನು ಕೈಗೊಂಡರು. ವ್ರತದ ಸಾಫಲ್ಯಕ್ಕಾಗಿ ಕ್ರೋಧ, ಹರ್ಷ, ಶೋಕಗಳನ್ನು ಪರಿತ್ಯಜಿಸಿ, ಹನ್ನೆರಡು ವರ್ಷಗಳ ಪರ್ಯಂತವಾಗಿ ನದಿಯ ನೀರಿನಲ್ಲಿಯೇ ವಾಸಮಾಡಿದರು. ಅಷ್ಟು ದೀರ್ಘಕಾಲ ನೀರಿನೊಳಗೆ ಇದ್ದುದರಿಂದ ಅವರಿಗೆ ಎಲ್ಲಾ ಜಲಚರ ಪ್ರಾಣಿಗಳ ಮೇಲೆ ವಿಶೇಷವಾದ ಪ್ರೀತಿ ವಿಶ್ವಾಸಗಳು ಮೂಡಿದವು.

🌷ಹೀಗಿರಲು ಒಂದಾನೊಂದು ದಿನ, ಮೀನು ಹಿಡಿದು ಜೀವಿಸುವ ಬೆಸ್ತರ ಗುಂಪೊಂದು ನದಿಯಲ್ಲಿ ಮೀನು ಹಿಡಿಯಲು ನಿಶ್ಚಯಿಸಿ, ಚ್ಯವನರು ಇದ್ದಂತಹ ನದಿ ನೀರನ್ನು ಉದ್ದವಾಗಿಯೂ, ಅಗಲವಾಗಿಯೂ, ಗಟ್ಟಿಯಾಗಿಯೂ ಹೆಣೆದಿದ್ದ ನೂತನವಾದ ಬಲೆಗಳಿಂದ ಮುಚ್ಚಿದರು. ಸ್ವಲ್ಪಹೊತ್ತು ಕಳೆದು ಎಲ್ಲರೂ ಒಟ್ಟಿಗೆ ಸೇರಿ ಬಲೆಯನ್ನು ಮೇಲಕ್ಕೆ ಎಳೆದರು. ಆಗ ಮೀನುಗಳು, ಇತರ ಜಲಚರ ಪ್ರಾಣಿಗಳೊಂದಿಗೆ ದೈವೇಚ್ಛೆಯಂತೆ ಚ್ಯವನ ಮಹರ್ಷಿಗಳೂ ಬಲೆಯೊಳಗಿದ್ದುದರಿಂದ, ಅವರೂ ಎಳೆಯಲ್ಪಟ್ಟರು. ಭೂಸ್ಪರ್ಶವಾಗುತ್ತಲೇ ಮೀನುಗಳು ಮರಣಹೊಂದಿದವು. ಇದನ್ನು ಕಂಡು ಮರುಗಿದ ಚ್ಯವನರು ಬೆಸ್ತರಿಗೆ, ತಾವು ಬಹಳ ದಿನಗಳು ನೀರಿನಲ್ಲಿ ಜಲಚರಗಳೊಂದಿಗೆ ಇದ್ದುದರಿಂದ ಈಗ ಅವುಗಳನ್ನು ಪರಿತ್ಯಜಿಸಲಾರೆವೆಂದು ತಿಳಿಸಿ, ತಾವೂ ಬದುಕಿದರೂ ಅಥವಾ ಸತ್ತರೂ ಅದು ಮೀನುಗಳ ಜೊತೆಯಲ್ಲಿಯೇ ಎಂದು ನುಡಿದರು.

🌷ಇದರಿಂದ ಭಯಾಶ್ಚರ್ಯಗಳಿಂದ ಕೂಡಿದ ಬೆಸ್ತರು ಕೂಡಲೆ ತಮ್ಮ ಅರಸನಾದ ನಹುಷ ಮಹಾರಾಜನಿಗೆ ಎಲ್ಲವನ್ನು ಅರಿಕೆ ಮಾಡಿಕೊಂಡರು. ಕೂಡಲೇ ತನ್ನ ಅಮಾತ್ಯರೂ, ಪುರೂಹಿತರ ಸಹಿತನಾಗಿ ರಾಜನಾದ ನಹುಷನು ಚ್ಯವನರ ಬಳಿ ಬಂದು, “ದ್ವಿಜೋತ್ತಮರೆ! ತಮಗೆ ಪ್ರಿಯವಾದ ಯಾವ ಕಾರ್ಯವನ್ನು ಮಾಡಬೇಕೆಂದು ತಿಳಿಸಿ, ಅದು ಅತಿ ದುಷ್ಕರವಾದ ಕಾರ್ಯವೇ ಆಗಿದ್ದರೂ ತಾವು ಹೇಳುವ ಕಾರ್ಯವನ್ನು ಮಾಡುವೆ” ಎಂದು ಅರಿಕೆ ಮಾಡಿಕೊಂಡನು.

🌷ಆಗ ಚ್ಯವನ ಮಹರ್ಷಿಗಳು, “ಮಹಾರಾಜ! ಈ ಬೆಸ್ತರು ಬಹಳ ಶ್ರಮಪಟ್ಟಿದ್ದಾರೆ. ಆದುದರಿಂದ ನೀನು ಅವರಿಂದ ನನ್ನನ್ನೂ, ನನ್ನೊಡನೆ ಇರುವ ಮೀನುಗಳನ್ನು ಕ್ರಯಕ್ಕೆ ತೆಗೆದುಕೋ” ಎಂದರು. ತಕ್ಷಣವೇ ರಾಜ ನಹುಷನು, “ಮಂತ್ರಿಗಳೇ! ಈ ಕೂಡಲೇ ಸಾವಿರ ನಾಣ್ಯಗಳನ್ನು ಬೆಸ್ತರಿಗೆ ಕೊಡಿ” ಎಂದನು. ಅದನ್ನು ಕೇಳಿದ ಚ್ಯವನರು, “ಹೇ ರಾಜನ್! ನಾನು ಕೇವಲ ಸಾವಿರ ನಾಣ್ಯ ಬೆಲೆಯುಳ್ಳವನೇ?” ಎಂದರು. ಆಗ ತಬಿಬ್ಬಾದ ರಾಜ ಒಂದು ಲಕ್ಷ ನಾಣ್ಯ ನೀಡಲು ಹೇಳಿದ. ಹೀಗೆ ಒಂದು ಕೋಟಿ, ಹತ್ತು ಕೋಟಿ, ಲಕ್ಷ ಕೋಟಿ ಮೊತ್ತ ದಾಟಿದರೂ ಮಹರ್ಷಿ ಚ್ಯವನರ ಮೌಲ್ಯ ಎಷ್ಟೆಂದು ಬಗೆಹರಿಯಲಿಲ್ಲ. ಕೊನೆಗೆ ಅರ್ಧ ರಾಜ್ಯವಾಯಿತು. ಕಟ್ಟಕಡೆಗೆ ಪೂರ್ಣರಾಜ್ಯದ ಪ್ರಸ್ತಾಪವಾಯಿತು.

🌷ಚ್ಯವನರು ರಾಜನಿಗೆ ಆತನ ಅರ್ಧರಾಜ್ಯಕ್ಕಾಗಲಿ, ಸಮಗ್ರ ರಾಜ್ಯಕ್ಕಾಗಲಿ ತಾನು ವಿನಿಮಯಿಸಲ್ಪಡತಕ್ಕವನಲ್ಲ, ಅಷ್ಟು ಮಾತ್ರವೇ ತಮ್ಮ ಬೆಲೆಯೆಂದು ಭಾವಿಸಬೇಡವೆಂದು ತಿಳಿಸಿ, ಯೋಗ್ಯವಾದ ಮೌಲ್ಯವನ್ನು ಬೆಸ್ತರಿಗೆ ನೀಡಲು ತಿಳಿಸಿ, ತಮ್ಮ ಬೆಲೆಯ ವಿಷಯವಾಗಿ ಋಷಿಗಳೊಡನೆ ಸಮಾಲೋಚಿಸಲು ಸೂಚಿಸಿದರು. ಆಗ ಅಲ್ಲಿಗೆ ಕಂದಮೂಲಫಲಹಾರಿಯೂ, ಗೋಪುತ್ರರೂ, ವನಚರಿಯೂ ಆದ ಋಷಿಯೋರ್ವರು ಬಂದರು. ಅವರು, “ಮಹಾರಾಜ! ಚ್ಯವನ ಮಹರ್ಷಿಗಳು ಹೇಗೆ ಸಂತೋಷ ಹೊಂದಬಲ್ಲರೆಂದು ನನಗೆ ತಿಳಿದಿದೆ” ಎಂದರು. ಆಗ ನಹುಷನು, “ಭೃಗುಪುತ್ರನಾದ ಚ್ಯವನರ ಮೌಲ್ಯ ತಿಳಿಸಿ, ನನ್ನನ್ನೂ ನನ್ನ ದೇಶವನ್ನೂ, ನನ್ನ ಕುಲವನ್ಶು ರಕ್ಷಿಸಿ” ಎಂದನು.

🌷ಆಗ ಆ ಗೋಪುತ್ರರು ಮಹಾರಾಜನನ್ನೂ, ಆತನ ಪರಿವಾರವನ್ನೂ ಕುರಿತು, “ಋಷಿಗಳು ತಮ್ಮ ತಪಸ್ಸಿನಿಂದಾಗಿ, ಇಡೀ ಲೋಕಕ್ಕೆ ಕಲ್ಯಾಣವನ್ನುಂಟು ಮಾಡುವಂತೆ, ದೇವತೆಗಳನ್ನು ಆರಾಧಿಸಿ ಶ್ರೇಷ್ಠರಾಗಿದ್ದಾರೆ. ಅದರಂತೆ ಗೋವುಗಳಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ ಒಂದು ಗೋವನ್ನು ಚ್ಯವನರ ಮೌಲ್ಯವನ್ನಾಗಿ ನಿಶ್ಚಯಿಸು” ಎಂದರು. ಗೋಪುತ್ರರ ಮಾತಿನಿಂದ ಅಮಿತಾನಂದವನ್ನು ಹೊಂದಿದ ರಾಜನು, ಒಂದು ಹಸುವನ್ನು ಬೆಸ್ತರಿಗೆ ನೀಡಿ ಚ್ಯವನರಿಗೆ, “ಇದು ನಿಮಗೆ ಅನುರೂಪನಾದ ಮೌಲ್ಯವೆಂದು ನಾನು ಭಾವಿಸಿದ್ದೇನೆ” ಎಂದನು.


🌷ಗಾವೋ ಲಕ್ಷ್ಮ್ಯಾಃ ಸದಾ ಮೂಲಂ ಗೋಷು ಪಾಪ್ಮಾ ನ ವಿದ್ಯತೇ|

ಅನ್ನಮೇವ ಸದಾ ಗಾವೋ ದೇವಾನಾಂ ಪರಮಂ ಹವಿಃ||


🌻”ಹಸುಗಳು ಯಾವಾಗಲೂ ಲಕ್ಷ್ಮಿಗೆ ಮೂಲ ಕಾರಣವಾಗಿವೆ. ಅವುಗಳಲ್ಲಿ ಪಾಪವೆಂಬುದೇ ಇಲ್ಲ. ಗೋವುಗಳು ಮನುಷ್ಯರಿಗೆ ಅನ್ನ ನೀಡುವ ಮಾತೃಸ್ವರೂಪಗಳಾಗಿವೆ”


🌷ನಿವಿಷ್ಟಂ ಗೋಕುಲಂ ಯತ್ರ ಶ್ವಾಸಂ ಮುಂಚತಿ ನಿರ್ಭಯಮ್|

ವಿರಾಜಯತಿ ತಂ ದೇಶಂ ಪಾಪಂ ಚಾಸ್ಯಾಪಕರ್ಷತಿ||


ಯಾವ ಸ್ಥಳದಲ್ಲಿ ಗೋವುಗಳ ಸಮುದಾಯವು ಯಾವ ಭಯವೂ ಇಲ್ಲದೇ ಉಸಿರಾಡುವುದೋ ಆ ಸ್ಥಳವು ವಿಶೇಷವಾಗಿ ಶೋಭಿಸುತ್ತದೆ. ಆ ಪ್ರದೇಶದಲ್ಲಿರುವ ಪಾಪವನ್ನು ಗೋವುಗಳು ಸೆಳೆದುಕೊಂಡು ಬಿಡುತ್ತವೆ” ಎಂದರು. ಹೀಗೆ ಅನೇಕಾನೇಕ ಗೋಮಹಾತ್ಮೆಗಳನ್ನು ಚ್ಯವನ ಮಹರ್ಷಿಗಳಿಂದ ಆಲಿಸಿದ ಬೆಸ್ತರು, ರಾಜನು ತಮಗೆ ನೀಡಿದ್ದ ಗೋವನ್ನು ಚ್ಯವನರಿಗೆ ಸಮರ್ಪಿಸಿ ತಮ್ಮನ್ನು ಉದ್ಧರಿಸುವಂತೆ ಪ್ರಾರ್ಥಿಸಿದರು. ಅವರುಗಳ ಪ್ರಾರ್ಥನೆಯಂತೆ ಆ ಗೋವನ್ನು ಸ್ವೀಕರಿಸಿದ ಚ್ಯವನ ಮಹರ್ಷಿಗಳು ತಮ್ಮ ತಪಃಶಕ್ತಿಯಿಂದ ಆ ಎಲ್ಲ ಬೆಸ್ತರನ್ನು ಮತ್ತು ಮರಣಹೊಂದಿದ್ದ ಮೀನುಗಳನ್ನು ಸ್ವರ್ಗಕ್ಕೆ ಹೋಗುವಂತೆ ಮಾಡಿದರು. ಬೆಸ್ತರೂ ಮತ್ತು ಮೀನುಗಳೂ ಸ್ವರ್ಗಾರೋಹಣ ಮಾಡುತ್ತಿರುವುದನ್ನು ನೋಡಿ ರಾಜ ನಹುಷನು ಮೂಕವಿಸ್ಮಿತನಾಗಿ ನಿಂತನು.







Comments

Rated 0 out of 5 stars.
No ratings yet

Add a rating
bottom of page